ದೊಡ್ಡದಗರೆ -
	ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನೀ ಉಪಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ.  ಇದರ ವೈಜ್ಞಾನಿಕ ಹೆಸರು ಕ್ಯಾಸಿಯ ಗ್ರ್ಯಾಂಡಿಸ್, ಪನಾಮ ಇದರ ತವರು ಎಂದು ಹೇಳಲಾಗಿದೆ.  ಅಮೆರಿಕದ ಉಷ್ಣವಲಯ, ಭಾರತಗಳಲ್ಲಿ ಇದು ಹೇರಳವಾಗಿ ಕಾಣದೊರೆಯುತ್ತದೆ.  ಇದು 15 - 20  ಎತ್ತರಕ್ಕೆ ಬೆಳೆಯುವ ಮರ.  ಎಲೆಗಳು ಏಕಪಿಚ್ಛಕ ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 10 - 20 ಜೊತೆ ಕಿರು ಎಲೆಗಳುಂಟು.  ಎಲೆಗಳ ಜೋಡನೆ ಪರ್ಯಾಯ ರೀತಿಯದು.  ಎಳೆಯವಾಗಿರುವಾಗ ಎಲೆಗಳು ತಾಮ್ರ ಬಣ್ಣದವಾಗಿರುವುವು.  ದೊಡ್ಡದಗರೆ ವರ್ಷಕ್ಕೆ ಎರಡು ಸಲ (ಫೆಬ್ರುವರಿ - ಮಾರ್ಚ್ ಹಾಗೂ ಜೂನ್ - ಜುಲೈ) ಹೂ ಬಿಡುತ್ತದೆ ; ಹೂಗೊಂಚಲುಗಳು ಎಲೆಗಳ ಕಂಕುಗಳಲ್ಲಿ ಮೂಡುವುವು. ಹೂಗಳ ಬಣ್ಣ ನಸುಗೆಂಪು.  ಇದನ್ನು ಬೀಜದಿಂದ ಅಭಿವೃದ್ಧಿಪಡಿಸಲಾಗುತ್ತದೆ.  ರಸ್ತೆಯ ಅಂಚಿನಲ್ಲಿ, ಉದ್ಯಾನವನಗಳಲ್ಲಿ, ಅಲಂಕಾರಕ್ಕಾಗಿ ದೊಡ್ಡದಗರೆಯನ್ನು ಬೆಳೆಸುವುದಲ್ಲದೆ ಇದರ ತಿರುಳನ್ನು ರೇಚಕವಸ್ತುವಾಗಿ ಉಪಯೋಗಿಸುವುದು ಉಂಟು.  ಇದರ ಚೌಬೀನೆ ಉಪಕರಣಗಳ ತಯಾರಿಕೆಗೆ ಉತ್ತಮವಾಗಿಲ್ಲ.  ಆದರೆ ಉರುವಲಾಗಿ ಬಳಸಬಹುದು. 
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ